ಮಾಟ್, ಜಾನ್ ರಾಲೀ
1865-1955. ಅಮೆರಿಕದ ಕ್ರೈಸ್ತ ಧಾರ್ಮಿಕ ನಾಯಕ. ನ್ಯೂಯಾರ್ಕ್‍ನ ಲಿವಿಂಗ್‍ಸ್ಟನ್ ಮಾನೋರ್ ಎಂಬಲ್ಲಿ ಜನಿಸಿದ. ಈತ ತನ್ನ ಬದುಕಿನುದ್ದಕ್ಕೆ ಅಮೆರಿಕೆಯ ವೈಎಂಸಿಎ (ಯಂಗ್ ಮ್ಯಾನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್) ಎಂಬ ಸಂಸ್ಥೆಯ ಜೊತೆ ನಿಕಟಸಂಪರ್ಕವಿರಿಸಿಕೊಂಡಿದ್ದು ಅಂತಾರಾಷ್ಟ್ರೀಯ ಭ್ರಾತೃತ್ವಕ್ಕಾಗಿ ದುಡಿದ. ವೈಎಂಸಿಎ ಅಂತಾರಾಷ್ಟ್ರೀಯ ಸಮಿತಿಯ ವಿದ್ಯಾರ್ಥಿ ಕಾರ್ಯದರ್ಶಿಯಾಗಿ (1888-1915), ಕಾರ್ಯದರ್ಶಿಯಾಗಿ (1915-1931). ಅಧ್ಯಕ್ಷನಾಗಿ (1926ರಿಂದ) ಸೇವೆ ಸಲ್ಲಿಸಿದ. ವಿದ್ಯಾರ್ಥಿ ಸ್ವಯಂಸೇವಾ ಚಳವಳಿಯ ಕ್ರಿಯಾಶೀಲ ಕಾರ್ಯದರ್ಶಿ ಹಾಗೂ ಅಧ್ಯಕ್ಷನಾಗಿ ದುಡಿದು (1888-1920) ಅನಂತರ ಡ್ಲ್ಯೂ ಎಸ್ ಸಿ ಎಫ್ (ವಲ್ಡ್ರ್ಸ್ ಸ್ಟೂಡೆಂಟ್ ಕ್ರಿಶ್ಚಿಯನ್ ಫೆಡರೇಶನ್) ಎಂಬ ಸಂಘವನ್ನು ಸ್ಥಾಪಿಸಿದ. ಈ ಸಂಘದ ಅಧ್ಯಕ್ಷನಾಗಿ (1920-1942), ಗೌರವಾಧ್ಯಕ್ಷನಾಗಿ (1942ರಿಂದ) ಈತ ಸೇವೆಸಲ್ಲಿಸಿದ್ದಾನೆ. ಅತ್ಯುತ್ತಮ ಧಾರ್ಮಿಕ ಸಂಘಟಿಕ ಎಂಬ ಗೌರವಕ್ಕೆ ಇವನು ಪಾತ್ರನಾಗಿದ್ದ. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಈತ ಸಲ್ಲಿಸಿದ ಸೇವೆಗಾಗಿ ಇವನಿಗೆ ವಿಶಿಷ್ಟ ಸೇವಾಪದಕ ನೀಡಿ ಗೌರವಿಸಲಾಯಿತು. 1946ರಲ್ಲಿ ಇವನಿಗೆ ನೊಬೆಲ್ ಶಾಂತಿ ಪಾರಿತೋಷಕ ದೊರಕಿತು (ಎಮಿಲಿ ಜಿ. ಬ್ಲಾಕ್ ಎಂಬುವನೊಡನೆ ಈ ಬಹುಮಾನವನ್ನು ಹಂಚಿಕೊಂಡ).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ